ನಾವಿಕಪಂಚಾಂಗ  
 	ಆಕಾಶಕಾಯಗಳ ವೀಕ್ಷಣೆಯಿಂದ ಸ್ವಂತ ನೆಲೆಯನ್ನು ನಿರ್ಧರಿಸಿ ನೌಕಾಯಾನ ಸಾಗಿಸಲು ಅನುಕೂಲವಾಗುವಂತೆ ಖಗೋಳ ವೈಜ್ಞಾನಿಕ ದತ್ತಾಂಶಗಳನ್ನು ಒಳಗೊಂಡಿರುವ ಪುಸ್ತಕ (ನಾಟಿಕಲ್ ಆಲ್ಮನಕ್). ವಿಶಾಲವಾದ ಕಡಲಿನಲ್ಲಿ ನಾವಿಕರು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುವಾಗ ದಿಕ್ಕನ್ನು ಸೂಚಿಸಲು ಅವರು ಅಂತಿಮವಾಗಿ ಆಕಾಶಕಾಯಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ ಅವೆಲ್ಲವೂ ಸ್ಥಳದಿಂದ ಸ್ಥಳಕ್ಕೆ ಹಾಗೂ ಕ್ಷಣದಿಂದ ಕ್ಷಣಕ್ಕೆ ತಮ್ಮ ನೆಲೆಗಳನ್ನು ಬದಲಾಯಿಸುತ್ತಲೇ ಇರುವುದರಿಂದ ಅವನ್ನು ಕುರಿತ ಖಚಿತ ಪುರಾವೆಗಳು ಪರಾಮರ್ಶೆಗೆ ದೊರೆತಾಗ ಮಾತ್ರ ನಾವಿಕ ಸ್ವಂತ ಸ್ಥಾನ ಮತ್ತು ತಾನು ಸಾಗುತ್ತಿರುವ ದಿಶೆಗಳನ್ನು ಕುರಿತಂತೆ ಯುಕ್ತ ನಿರ್ಧಾರ ತಳೆಯಬಲ್ಲ. ಇಂಥ ಪುರಾವೆಗಳನ್ನು ಒದಗಿಸುವ ಪುಸ್ತಕವೇ ನಾವಿಕ ಪಂಚಾಂಗ. ಕಡಲಿನಲ್ಲೇ ಆಗಲಿ ನೆಲದಲ್ಲೇ ಆಗಲಿ ತನ್ನ ನೆಲೆಯನ್ನು ಅರಿಯಲು ವ್ಯಕ್ತಿಗೆ ತನ್ನ ಅಕ್ಷಾಂಶ ರೇಖಾಂಶಗಳು ತಿಳಿದಿರಬೇಕಾದದ್ದು ಅಗತ್ಯ. ಧ್ರುವ ನಕ್ಷತ್ರದ ಕೋನೋನ್ನತಿ ವೀಕ್ಷಕನ ಅಕ್ಷಾಂಶಕ್ಕೆ ಸಮವಾದ್ದರಿಂದ ನಿರಭ್ರ ರಾತ್ರಿ ವೇಳೆ ಧ್ರುವ ನಕ್ಷತ್ರವನ್ನು ನೋಡಿ ಅಕ್ಷಾಂಶವನ್ನು ನಿರ್ಧರಿಸುವುದು ಸುಲಭ. ಆದರೆ ರೇಖಾಂಶವನ್ನು ಇಂಥ ಯಾವ ಸುಲಭ ವೀಕ್ಷಣೆಯಿಂದ ಹೇಳುವುದೂ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಚಂದ್ರ ಹಾಗೂ ಪ್ರಸಿದ್ಧ ನಕ್ಷತ್ರಗಳ ಸಾಪೇಕ್ಷ ಸ್ಥಾನಗಳನ್ನೂ ಕೋನೋನ್ನತಿಗಳನ್ನೂ ಅಳೆದು ನಾವಿಕಪಂಚಾಂಗದಲ್ಲಿ ನೀಡಿರುವ ದತ್ತಾಂಶಗಳ ಅನುಸಾರ ಸಂಸ್ಕರಿಸಬೇಕಾಗುವುದು. ಎಂದೇ ನಾವಿಕಪಂಚಾಂಗ ನಾವಿಕನಿಗೆ ಅತ್ಯಂತ ಅವಶ್ಯವಾದ ಹಾಗೂ ಪ್ರಿಯವಾದ ಒಡನಾಡಿ ಮತ್ತು ಮಾರ್ಗಬಂಧು.

    ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ರಷ್ಯ, ಸ್ಪೇನ್ ಮತ್ತು ಜರ್ಮನಿ ಈ ಆರು ರಾಷ್ಟ್ರಗಳು ನಾವಿಕಪಂಚಾಂಗವನ್ನು ವರ್ಷವರ್ಷವೂ ಪ್ರಕಟಿಸುತ್ತವೆ. ಆದರೆ 1957ನೆಯ ಇಸವಿಯ ಅನಂತರ ಜರ್ಮನಿಯ ಪ್ರಕಟಣೆ ನಿಂತುಹೋಯಿತು. ಭಾರತ ಸರ್ಕಾರ 1958ರಿಂದ ನಾವಿಕ ಪಂಚಾಂಗವನ್ನು ಪ್ರಕಟಿಸಲು ತೊಡಗಿದೆ. ಇದರಲ್ಲಿ ಅಡಕವಾಗಿರುವ ಅಂಕೆಅಂಶಗಳ ಗಣನೆ ಬಹಳ ಕ್ಲಿಷ್ಟ ಮತ್ತು ಶ್ರಮದಾಯಕ ಕಾರ್ಯ. ಹೀಗಾಗಿ ಆರು ರಾಷ್ಟ್ರಗಳೂ ಸಹಕರಿಸಿ ಪಂಚಾಂಗಕ್ಕೆ ಬೇಕಾಗುವು ಸಮಗ್ರ ಕಾರ್ಯಗಳನ್ನು ತಮ್ಮೊಳಗೆ ಹಂಚಿಕೊಂಡು ಅಂಕೆಅಂಶಗಳನ್ನು ಪರಸ್ಪರ ವಿನಿಮಯಿಸಿ ತಮ್ಮ ನಾವಿಕಪಂಚಾಂಗವನ್ನು ಪ್ರಕಟಿಸುತ್ತಿವೆ.

    ಭಾರತದ ನಾವಿಕಪಂಚಾಂಗದಲ್ಲಿ ಪ್ರತಿದಿವಸದ ಅಂದರೆ ಪಂಚಾಂಗ, ಮಧ್ಯಾಹ್ನಕಾಲದ ಸೂರ್ಯನ ವಿಷುವದಂಶ ಘಂಟಾವೃತ್ತಾಂಶಗಳನ್ನೂ ಅಕ್ಷಾಂಶ ರೇಖಾಂಶಗಳನ್ನೂ ನಕ್ಷತ್ರಮಾನ ಕಾಲವನ್ನೂ ಚಂದ್ರನ ಅಕ್ಷಾಂಶ ರೇಖಾಂಶಗಳನ್ನೂ ಕೊಟ್ಟಿರುವುದಲ್ಲದೆ ಚಂದ್ರನ ಪ್ರತಿ ಗಂಟೆಯ ವಿಷುವದಂಶ ಘಂಟಾವೃತ್ತಾಂಶಗಳನ್ನೂ ಕೊಟ್ಟಿರುತ್ತದೆ.  ಹಾಗೆಯೇ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಮತ್ತು ಪ್ಲೂಟೋ ಗ್ರಹಗಳ ಸೂರ್ಯಕೇಂದ್ರೀಯ, ಭೂಮಿ ಕೇಂದ್ರೀಯ ಅಕ್ಷಾಂಶ ರೇಖಾಂಶಗಳನ್ನೂ ವಿಷುವದಂಶ ಘಂಟಾವೃತ್ತಾಂಶಗಳನ್ನೂ ಭೂಮಿಯಿಂದ ಆ ಗ್ರಹಗಳ ದೈನಂದಿನ ದೂರ ಮತ್ತು ಗತಿಗಳನ್ನೂ ನಮೂದಿಸಿರುತ್ತದೆ; ಅರುವತ್ತೆಂಟು ಪ್ರಧಾನ ನಕ್ಷತ್ರಗಳ ಸ್ಥಾನಗಳನ್ನೂ ಗುರುತಿಸಿರುತ್ತದೆ.  ವರ್ಷದಲ್ಲಿ ಸಂಭವಿಸುವ ಸೂರ್ಯ ಚಂದ್ರ ಗ್ರಹಣಗಳ ಪೂರ್ಣ ವಿವರಣೆಯನ್ನೇ ಅಲ್ಲದೆ ಭಾರತದ ಹಲವು ಪ್ರಧಾನ ನಗರಗಳಿಗೆ ಅನ್ವಯಿಸುವ ಸ್ಪರ್ಶ, ಮಧ್ಯ, ಮೋಕ್ಷಕಾಲಗಳನ್ನೂ ಗ್ರಹಣ ಸ್ವಭಾವವನ್ನೂ ತಿಳಿಸಿರುತ್ತದೆ. ಭಾರತದ ಮಾಧ್ಯರೇಖಾಂಶಕ್ಕೂ (82.50 ಪೂರ್ವ) ಕಲ್ಕತ್ತ, ಮದ್ರಾಸ್, ದೆಹಲಿ, ಮುಂಬಯಿ ನಗರಗಳಿಗೂ ಸರಿಯಾಗುವ ಸೂರ್ಯೋದಯ ಸೂರ್ಯಾಸ್ತ ಕಾಲಗಳನ್ನು ಮತ್ತು ಚಂದ್ರೋದಯ ಚಂದ್ರಾಸ್ತ ಕಾಲಗಳನ್ನು ಸಹ ಗುರುತಿಸಿರುತ್ತದೆ. ಈ ಅಂಕೆಗಳಿಂದ ನಮಗೆ ಬೇಕಾದ ಇತರ ಯಾವ ಸ್ಥಳಕ್ಕಾದರೂ ಈ ಅಂಶಗಳನ್ನು ಗುಣಿಸಿಕೊಳ್ಳುವ ವಿಧಾನದ ವಿವರಣೆಯೂ ಇದೆ. ಕಡೆಯದಾಗಿ ಜನಸಾಮಾನ್ಯರ ವ್ಯಾವಹಾರಿಕ ಪಂಚಾಂಗ ಭಾಗದಲ್ಲಿ, ರಾಷ್ಟ್ರೀಯ ಸೌರ ಶಕ ವರ್ಷದ ದಿವಸಗಳಿಗೆ ಸರಿಯಾದ ವಾರ, ಪಾಶ್ಚಾತ್ಯ ತಾರೀಕು, ನಮ್ಮ ತಿಥಿ ನಕ್ಷತ್ರಗಳ ಅಂತ್ಯ ಕ್ಷಣಗಳು, ಸೂರ್ಯೋದಯ, ಮಧ್ಯಾಹ್ನ, ಸೂರ್ಯಾಸ್ತ ಕಾಲಗಳು, ಸೂರ್ಯನ ಮಹಾನಕ್ಷತ್ರ ಪ್ರವೇಶ ಕಾಲ, ವೈಧೃತೀ, ವ್ಯತೀಪಾತಯೋಗ ಕಾಲಗಳು, ಹಬ್ಬ ಹುಣ್ಣಿಮೆಗಳು ಇವುಗಳೆಲ್ಲ ಅಧಿಕೃತವಾಗಿ ನಿರ್ಣಯವಾಗಿವೆ. ಗ್ರಹ-ಚಂದ್ರ ಯೋಗಗಳೂ, ಗ್ರಹಗಳ ಸಮಾಗಮಾಭಿಮುಖ ಕಾಲಗಳು ಮುಂತಾದ ಖಗೋಳೀಯ ಘಟನೆಗಳ ಪಟ್ಟಿಯೂ ನಾವಿಕಪಂಚಾಂಗದಲ್ಲಿದೆ.
(ಆರ್.ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ